ಬುಧವಾರ, ಜನವರಿ 6, 2010

ಯಾರು ಬರಬೇಕು?

ನಾವೇಕೆ ನಮ್ಮ ನಾಗರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನಮ್ಮ ಶಕ್ತಿಯನ್ನು ಬಳಸಿಕೊಳ್ಳೋದಿಲ್ಲ? ಎಲ್ಲವನ್ನೂ ಬೇರೆ ಯಾರಾದ್ರೂ ಬಂದು ಪರಿಹರಿಸಬೇಕೆಂದು ಕಾಯುತ್ತೇವೆ ಏಕೆ? ನಮ್ಮ ಮನೆಯ ಮುಂದಿನ ಬೀದಿ ದೀಪ ಕೆಟ್ಟಿದೆ ಎಂದು ಮುನಿಸಿಪಾಲಿಟಿಗೊಂದು ಕರೆ ಮಾಡಬಹುದಲ್ಲವೇ? ನಮ್ಮ ಬಡಾವಣೆಯ ರಸ್ತೆ ನಿರ್ಮಾಣ ನಡೀತಿರುವಾಗ ಕೆಲಸ ಗುಣಮಟ್ಟದಲ್ಲಿದೆಯೆ ಎಂದು ಬಡಾವಣೆಯ ಹತ್ತು ಮಂದಿ ಒಂದರ್ಧ ಗಂಟೆ ವೀಕ್ಷಿಸಬಹುದಲ್ಲವೇ? ಸರಿಯಿಲ್ಲದಿದ್ದರೆ ಪ್ರಶ್ನಿಸಬಹುದಲ್ಲವೇ? ಕೆಲಸ ಮುಗಿದ ಮೇಲೆ ಕಾಮಗಾರಿ ಕಳಪೆ ಎಂದು ದೂರುವುದೇಕೆ? ಮೊದಲೇ ತಪ್ಪು ಕಂಡು ಹಿಡಿದು ಸರಿಯಾಗಿ ಕೆಲಸ ಮಾಡಿಸಬಹುದಲ್ಲವೇ? ಈ ಕೆಲಸವನ್ನು ಬೇರೆಯವರು ಮಾಡಲಿ ಎಂದುಕೊಂಡು ನಾವು ಮಾತ್ರ ಅದೇ ಕಳಪೆ ರಸ್ತೆಯಲ್ಲಿ ಬೈಕು ಓಡಿಸುತ್ತಾ ಬೈದುಕೊಂಡು ಹೋಗುತ್ತೇವಲ್ಲವೇ? ಹೀಗೆ ಪ್ರಶ್ನಿಸುವ, ಇದನ್ನು ಪ್ರತಿಭಟಿಸುವ ಗುತ್ತಿಗೆಯನ್ನು ಕನ್ನಡ ಚಳವಳಿಗಾರರಿಗೆ, ಹೋರಾಟಗಾರರಿಗೆ, ರೈತ ಸಂಘಕ್ಕೆ ಕೊಟ್ಟುಬಿಟ್ಟಿದ್ದೇವಲ್ಲವೇ? ಏನಾದರೂ ಆದ್ರೆ ಈ ಸಂಘಟನೆಗಳು ಪ್ರತಿಭಟಿಸಬೇಕು. ನಾವು ಮಾತ್ರ ಅವರು ಪ್ರತಿಭಟಿಸೋದನ್ನ ದೂರದಲ್ಲಿ ನಿಂತು ನೋಡಬೇಕು. ಅವರನ್ನು ಆಡಿಕೊಳ್ಳಬೇಕು. ನಾವೂ ಮಾಡೋದಿಲ್ಲ, ಮಾಡೋರನ್ನೂ ಬಿಡುವುದಿಲ್ಲ.....
ಇದನ್ನೆಲ್ಲಾ ಮಾಡುವ ಸಾಮರ್ಥ್ಯ ನಮಗಿದ್ದರೂ, ನಮ್ಮ ಕೈ ಅಳತೆಯಲ್ಲೇ ಇವನ್ನೆಲ್ಲಾ ಸರಿಪಡಿಸಿಕೊಳ್ಳಬಹುದಾಗಿದ್ದರೂ, ಒಂದು ಫೋನ್ ಹಾಕಿ ಮೇಲಧಿಕಾರಿಗೆ ವಿಷಯ ತಿಳಿಸಬಹುದಾಗಿದ್ದರೂ, ಒಂದು ಅರ್ಜಿ ಹಿಡಿದು ಮೇಲಧಿಕಾರಿಯನ್ನು ಕಂಡು ಈ ಕೆಲಸ ಮಾಡಿಸಬಹುದಾಗಿದ್ದರೂ, ಹತ್ತು ಜನ ಒಟ್ಟಾಗಿ ನಮ್ಮ ಬೀದಿಗೆ ಡಾಂಬರು ಹಾಕಿಸಿಕೊಳ್ಳುವ ತಾಕತ್ತಿದ್ದರೂ, ಅದನ್ನೆಲ್ಲ ಬಿಟ್ಟು ನಾವೆಲ್ಲ ಮಾಡೋ ಕೆಲಸ, ಪತ್ರಕರ್ತರು ಎದುರಿಗೆ ಸಿಕ್ಕರೆ ನಮ್ಮ ಬಡಾವಣೆಗೆ ರಸ್ತೆಯಿಲ್ಲ, ನಮಗೆ ನೀರು ಬರ್ತಿಲ್ಲ, ರಸ್ತೆ ಕಾಮಗಾರಿ ಕಳಪೆಯಾಗಿದೆ...ಇದನ್ನೆಲ್ಲ ನಿಮ್ಮ ಪತ್ರಿಕೆಯಲ್ಲಿ ಯಾ ಚಾನೆಲ್ಲಿನಲ್ಲಿ ಹಾಕಿ.....
ಹಾಗಾದ್ರೆ ಜನಸಾಮಾನ್ಯರಾದ ನಾವು ಮಾಡೋದಾದ್ರೂ ಏನು? ನಮ್ಮ ಮಗುವನ್ನು ಶಾಲೆಗೆ ಬಿಡೋದು, ಲೈಟ್ ಬಿಲ್ ಕಟ್ಟೋದು, ಅಂಗಡಿಗೆ ಹೋಗಿ ಸಾಮಾನು ತರೋದು, ಸಂಜೆ ಸಿಟಿಗೆ ಹೋಗಿ ಚುರುಮುರಿ ತಿನ್ನೋದು, ರಾತ್ರಿ ಊಟ ಮಾಡುತ್ತಾ ರಾಜಕಾರಣಿಗಳನ್ನ, ಅಧಿಕಾರಿಗಳನ್ನ, ಸರಕಾರವನ್ನ, ಯಡಿಯೂರಪ್ಪನ್ನ ಬೈಯೋದು ಇಷ್ಠೇನಾ????????????

ಭುವಿಯ ಕಂಬನಿ

ಸೂರ್ಯನಗಲಿಕೆಯ ವಿರಹ ತಾಳಲಾರದೆ, ಭುವಿ ಮಿಡಿದ ಕಂಬನಿ ಈ ಇಬ್ಬನಿ...

ನಿನ್ನ ನೆನಪುಗಳು..

ಪ್ರಿಯೆ, ನಿನ್ನ ನೆನಪುಗಳು ರಕ್ತಬೀಜಾಸುರನಂತೆ, ಕಡಿದಷ್ಟೂ ಹುಟ್ಟಿಕೊಳ್ಳುತ್ತವೆ ಮತ್ತೆ..ಮತ್ತೆ...

ಮಂಗಳವಾರ, ಡಿಸೆಂಬರ್ 15, 2009

ಲಾಠಿಗಳಿಗೆ ಕರುಣೆಯಿಲ್ಲ...









ಚಾಮರಾಜನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಆಗಾಗ ಶಾಂತಿಯುತ ಪ್ರತಿಭಟನೆಗಳನ್ನ ನಡೆಸುತ್ತಲೇ ಬಂದಿದ್ದಾರೆ. ತಮ್ಮ ಪ್ರತಿಭಟನೆಗಳಿಗೆ ಸೂಕ್ತ ಫಲಿತಾಂಶ ಸಿಗುವವರೆಗೂ ಅವರ ಹೋರಾಟ ನಡೆಯುತ್ತಲೇ ಇರುತ್ತದೆ. ಬಾರಿ ಡಿಸೆಂಬರ್ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲು ಅವರೆಲ್ಲಾ ತೀರ್ಮಾನಿಸಿದ್ದರು. ಅದರಂತೆ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮೊದಲ ದಿನದ ಪ್ರತಿಭಟನೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ರೈತರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಬಂದು ಜಿಲ್ಲಾಡಳಿತ ಭವನದ ಎದುರು ಇರುವ ಹೊಂಗೆಯ ಮರದ ಕೆಳಗೆ ರೈತರು ಪ್ರತಿಭಟನೆಯಲ್ಲಿ ಕೂರುವುದು ಎಂದಿನಂತೆ ನಡೆದು ಬಂದ ಕ್ರಮ. ಆದರೆ, ಇಲ್ಲಿರುವ ಜಿಲ್ಲಾಧಿಕಾರಿ ಮನೋಜಕುಮಾರ್ ಮೀನಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಟಿ.ಡಿ. ಪವಾರ್ ಅವರಿಗಾಗಲೀ ಚಳವಳಿಗಳ ಮೇಲೆ ನಂಬಿಕೆಯಿಲ್ಲ. ಯಾವುದೇ ಚಳವಳಿಗಳು ನಡೆಯಬಾರದು ಎಂದೇ ಅವರು ಭಾವಿಸಿದಂತಿದೆ. ಹಾಗಾಗಿ ಜಿಲ್ಲಾಡಳಿತ ಭವನದ ಬಳಿ ಬಂದ ರೈತರ ಮೆರವಣಿಗೆ ಮುಖ್ಯ ಗೇಟ್ನಿಂದ ಒಳ ಬರಬಾರದೆಂಬಂತೆ ಗೇಟ್ ಮುಚ್ಚಿಸಿದರು. ರೈತರು ಒಂದಷ್ಟು ಹೊತ್ತು ಘೋಷಣೆಗಳನ್ನು ಕೂಗಿದ ನಂತರ ಗೇಟ್ ತೆಗೆದರು. ಸ್ವಲ್ಪ ದೂರ ಬಂದ ನಂತರ, ರೈತರಿಗೆ ಇನ್ನೊಂದು ಹರ್ಡಲ್ಸ್ ಎದುರಾಯ್ತು. ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ಹೋಗಬಾರದೆಂಬಂತೆ ಪೊಲೀಸ್ ಬ್ಯಾರಿಕೇಡ್ಗಳನ್ನ ಹಾಕಲಾಯ್ತು. ರೈತರು ಇದನ್ನ ಖಂಡಿಸಿದ್ರು. ನಾವು ಶಾಂತಿಯುತ ಧರಣಿ ನಡೆಸಲು ಬಂದಿದ್ದೇವೆ. ಬ್ಯಾರಿಕೇಡ್ ಹಾಕಿ ನಮ್ಮನ್ನು ತಡೆಯುವ ಅವಶ್ಯಕತೆಯಿಲ್ಲ ಬಿಡಿ ಎಂದರು. ಕಚೇರಿಯಲ್ಲಿ ಕೂತಿದ್ದ ಡಿ.ಸಿ. ಯನ್ನ ಕರೆಸಿ ಎಂದರು. ಕೆಲ ನಿಮಿಷಗಳ ನಂತರ ಡಿ.ಸಿ. ಮನೋಜ್ ಕುಮಾರ್ ಮೀನಾ ಅಲ್ಲಿಗೆ ಬಂದರು. ರೈತರು ಬಂದು ಧರಣಿ ನಡೆಸಿದರೆ ಯಾವುದೇ ಅಡ್ಡಿಯಿಲ್ಲ ಅವರನ್ನ ಬಿಡಬಹುದು ಎಂದು ಅಡಿಷನಲ್ ಎಸ್ಪಿ ಶಿವಕುಮಾರ್ ಅವರು, ಡಿ.ಸಿ. ಎಸ್ಪಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಬ್ಯಾರಿಕೇಡ್ ಗಳನ್ನು ತೆಗೆಯಲಾಯಿತು. ರೈತರು ಧರಣಿ ಕುಳಿತರು. ಧರಣಿ ನಿರತ ರೈತರ ಅಹವಾಲುಗಳನ್ನು ಡಿ.ಸಿ. ಆಲಿಸಲೇ ಇಲ್ಲ. ಬದಲಿಗೆ ಜಿಲ್ಲೆಯಲ್ಲಿ ಮಳೆ ಚೆನ್ನಾಗಿ ಆಗಿದೆ. ನಿಮ್ಮ ಸಮಸ್ಯೆಗಳನ್ನ ಗ್ರಾಮಸಭೆಗಳಲ್ಲಿ ಹೇಳಿಕೊಳ್ಳಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಿಕೊಳ್ಳಿ. ನಾವೇನೂ ಮಾಡಲು ಬರುವಂತಿಲ್ಲ ಎಂದು ಕೈಚೆಲ್ಲಿ ಹೊರಟು ಹೋದರು.
ಇದು ಡೀಸಿ ಪರಿಹಾರಿಸಲಾರದಂಥ ಸಮಸ್ಯೆಗಳು ಎಂದರಿತ ರೈತರು ಸರ್ಕಾರದ ಸಚಿವರು ಬಂದು ಸಮಸ್ಯೆ ಆಲಿಸಲಿ ಎಂದು ಧರಣಿ ಮುಂದುವರಿಸಿದರು. ಎರಡನೇ ದಿನವೂ ಧರಣಿ ಮುಂದುವರಿಯಿತು. ಜಿಲ್ಲಾಧಿಕಾರಿ ಕ್ಯಾರೇ ಅನ್ನಲಿಲ್ಲ. ಸರಕಾರಕ್ಕೋ ಜಿಲ್ಲಾ ಉಸ್ತುವಾರಿ ಸಚಿವರಿಗೋ ಫೋನ್ ಹಚ್ಚಿ ಹೀಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಲಿಲ್ಲ. ಬದಲಿಗೆ ಇದೂ ಹತ್ತರಲ್ಲಿ ಹನ್ನೊಂದನೆಯ ಪ್ರತಿಭಟನೆ, ಎಲ್ಲ ಎದ್ದು ಹೋಗುತ್ತಾರೆ ಎಂದು ಭಾವಿಸಿದರು. ಡಿ.ಸಿ. ನಿರ್ಲಕ್ಷ್ಯ ಕಂಡ ರೈತರು ಚಳವಳಿಯನ್ನ ತೀವ್ರಗೊಳಿಸಲು ನಿರ್ಧರಿಸಿದರು. ಸ್ವತಃ ಮುಖ್ಯಮಂತ್ರಿಯವರೇ ನಮ್ಮ ಸಮಸ್ಯೆ ಆಲಿಸಲು ಬರಬೇಕೆಂಬ ಒತ್ತಾಯ ಮುಂದಿಟ್ಟು ಕುಳಿತರು. ನೇ ದಿನ ಎತ್ತುಗಾಡಿಗಳ ಮೆರವಣಿಗೆಯನ್ನ ಡಿ.ಸಿ. ಕಚೇರಿಗೆ ತೆಗೆದುಕೊಂಡು ಹೋದರು. ಅಲ್ಲಿದ್ದುದು ಕೇವಲ ಏಳೇ ಎತ್ತುಗಾಡಿ. ಅವುಗಳನ್ನ ಜೋಡಿ ರಸ್ತೆಯಿಂದ ಡಿ.ಸಿ. ಕಚೇರಿ ಆವರಣಕ್ಕೆ ಹೋಗದಂತೆ ಗೇಟ್ ಹಾಕಿ ನೂರಾರು ಪೊಲೀಸರನ್ನ ನಿಲ್ಲಿಸಿ ತಡೆಯಲಾಯಿತು. ಎತ್ತುಗಾಡಿಯಲ್ಲಿ ಒಳಹೋಗಿ ಬಂದು ಬಿಡುತ್ತೇವೆ ಅಲ್ಲಿ ನಿಲ್ಲುವುದಿಲ್ಲ ಎಂದು ರೈತರು ಕೋರಿಕೊಂಡರೂ ಅದಕ್ಕೆ ಅವಕಾಶ ನೀಡಲಿಲ್ಲ. ಡಿ.ಸಿ. ಕಚೇರಿ ಆವರಣಕ್ಕೆ ಬಿಡದಿದ್ದರಿಂದಾಗಿ ಎತ್ತುಗಾಡಿಗಳು ಜೋಡಿ ರಸ್ತೆಯಲ್ಲೇ ನಿಂತವು. ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದನ್ನರಿತ ಡಿವೈಎಸ್ಪಿ ಬಸವರಾಜು, ಎಸ್ಪಿ ಡಿ.ಸಿ.ಯವರಿಗೆ ಕರೆ ಮಾಡಿ ಐದೇ ನಿಮಿಷ ಗಾಡಿಗಳಲ್ಲಿ ಒಳಹೋಗಿ ಬಂದು ಬಿಡ್ತೇವೆ ಅಂತ ರೈತರು ಹೇಳ್ತಿದ್ದಾರೆ. ನಾನು ಅವರಿಂದ ಭರವಸೆ ಪಡೆದಿದ್ದೇನೆ ಬಿಟ್ಟರೆ ತೊಂದರೆಯೇನೂ ಆಗೋದಿಲ್ಲ ಎಂದು ವಿವರಿಸಿದರು. ಇದಕ್ಕೆ ಡಿ.ಸಿ. ಹಾಗೂ ಎಸ್ಪಿ ಬಿಲ್ಕುಲ್ ಒಪ್ಪಲಿಲ್ಲ. ಡಿವೈಎಸ್ಪಿ ಅಸಹಾಯಕರಾದರು.
ಡಿ.ಸಿ. ಕಚೇರಿಗೆ ಹೋಗುವ ಐಷಾರಾಮಿ ಕಾರುಗಳನ್ನ ಬಿಡುತ್ತೀರಿ. ರೈತರ ವಾಹನವಾದ ಎತ್ತುಗಾಡಿ ಬಿಡೋದಿಲ್ಲ ಅಂದ್ರೆ ಯಾವ ನ್ಯಾಯ ಎಂದು ರೈತರು ಪ್ರಶ್ನಿಸಿದರು. ಇದಕ್ಕೆ ಪೊಲೀಸರಲ್ಲಿ ಉತ್ತರವಿರಲಿಲ್ಲ. ರೈತರು ಜೋಡಿ ರಸ್ತೆಯಲ್ಲಿ ಗಾಡಿಗಳನ್ನು ಇನ್ನಷ್ಟು ಹೊತ್ತು ನಿಲ್ಲಿಸಿಕೊಂಡರೆ ಅವರನ್ನ ಅರೆಸ್ಟ್ ಮಾಡಿ ಎಂದು ಡಿ.ಸಿ. ಮನೋಜ್ ಕುಮಾರ್ ಮೀನಾ ಆದೇಶಿಸಿದ್ದರು. ತಾವು ಬಂಧಿತರಾದರೆ ನಮ್ಮ ಚಳವಳಿಯ ಉದ್ದೇಶ ಮೊಟಕಾಗುತ್ತದೆ ಎಂದರಿತ ರೈತರು ಎತ್ತುಗಾಡಿಗಳನ್ನು ಡಿ.ಸಿ. ಕಚೇರಿ ಒಳಗೆ ತೆಗೆದುಕೊಂಡು ಹೋಗುವ ನಿರ್ಧಾರ ಕೈಬಿಟ್ಟರು. ಎತ್ತುಗಾಡಿಗಳನ್ನ ರಸ್ತೆಯಿಂದ ಸೈಡಿಗೆ ನಿಲ್ಲಿಸಿಕೊಂಡು ಊಟ ಮಾಡಿ ಹೋಗುತ್ತೇವೆ. ಗೇಟಿನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಗಾಡಿ ನಿಲ್ಲಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಖಾಸಗಿ ಜಾಗದಲ್ಲಿ ಗಾಡಿ ನಿಲ್ಲಿಸಲೂ ಸರ್ವಾಧಿಕಾರಿ ಡಿ.ಸಿ. ಒಪ್ಪಲಿಲ್ಲ. ಹಾಗಾಗಿ ಚಕ್ಕಡಿಗಳು ಜೋಡಿ ರಸ್ತೆಯಲ್ಲೇ ನಿಲ್ಲಬೇಕಾಯ್ತು.
ಆಗ ಊಟದ ಸಮಯ. ಅಡುಗೆ ರೆಡಿಯಾಗಿತ್ತು. ೧೦ ನಿಮಿಷ ಊಟ ಮಾಡಿಕೊಂಡು ಗಾಡಿ ತೆಗೆಯುತ್ತೇವೆ ಎಂದು ಹೇಳಿದ ರೈತರು ತಮ್ಮಮಾತಿನಂತೆ ಊಟ ಮಾಡಿಕೊಂಡು ಗಾಡಿಗಳನ್ನು ಹೊಡೆದುಕೊಂಡು ಹೊರಟು ಹೋದರು.
ನೇ ದಿನ ಕೇವಲ ಧರಣಿ ಮುಂದುವರೆಯಿತು. ಐದನೇ ದಿನ ಟ್ರಾಕ್ಟರ್ ಮೆರವಣಿಗೆಯನ್ನ ರೈತರು ಹಮ್ಮಿಕೊಂಡರು. ಇದು ತಮ್ಮ ಚಳವಳಿಯಲ್ಲಿ ಮರೆಯಲಾಗದ ಕರಾಳ ದಿನವಾಗುತ್ತದೆ ಎಂದು ರೈತರು ಕನಸು ಸಹ ಕಂಡಿರಲಿಲ್ಲ. ಮಧ್ಯಾಹ್ನ ೧೨ ಗಂಟೆಗೆ ಪ್ರವಾಸಿ ಮಂದಿರದಿಂದ ೩೪ ಟ್ರಾಕ್ಟರ್ ಗಳಲ್ಲಿ ಮೆರವಣಿಗೆ ಹೊರಟಿತು. ದೊಡ್ಡಂಗಡಿ ಬೀದಿ ಚಿಕ್ಕಂಗಡಿ ಬೀದಿ, ಸಂತೆಮರಹಳ್ಳಿ ವೃತ್ತದ ಮೂಲಕ ಭುವನೇಶ್ವರಿವೃತ್ತಕ್ಕೆ ಮೆರವಣಿಗೆ ಸಾಗಿ ಬಂತು. ಅಲ್ಲಿ ಸುಮಾರು ೧೫ ನಿಮಿಷ ನಿಂತಿತು. ವೃತ್ತದ ತುಂಬಾ ಟ್ರಾಕ್ಟರ್ ಗಳೇ ತುಂಬಿದ್ದವು. ಇನ್ನೇನು ಡಿ.ಸಿ. ಕಚೇರಿ ತಲುಪಿ ಪ್ರತಿಭಟನೆ ಶಾಂತಿಯುತವಾಗಿ ಮುಗಿಯುತ್ತದೆ ಎಂದು ಎಲ್ಲರೂ ತಿಳಿದಿದ್ದರು. ಗಂಟೆ ಸುಮಾರಿಗೆ ಮೆರವಣಿಗೆ ಡಿ.ಸಿ. ಕಚೇರಿ ಗೇಟ್ ತಲುಪಿತು. ಅಲ್ಲಿ ಯಥಾ ಪ್ರಕಾರ ಗೇಟ್ ಮುಚ್ಚಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಒಳಗೆ ಬಿಡಿ ಡಿ.ಸಿ. ಕಚೇರಿ ಮುಂದಿನಿಂದ ಹೀಗೇ ಬಂದು ಬಿಡ್ತೇವೆ ಎಂದು ರೈತರು ಪೊಲೀಸರಿಗೆ ಮನವಿ ಮಾಡಿಕೊಂಡರು. ಮೊನ್ನೆ ಕೇವಲ ಚಕ್ಕಡಿಗಳನ್ನೇ ಒಳಬಿಡದಿದ್ದ ಪೊಲೀಸರು ಇನ್ನು ೩೪ ಟ್ರಾಕ್ಟರ್ ಗಳನ್ನ ಬಿಡ್ತಾರೆಯೇ? ಸರಿ, ರೈತರು ಜೋಡಿ ರಸ್ತೆಯಲ್ಲಿ ಟ್ರಾಕ್ಟರ್ ನಿಲ್ಲಿಸಿ ಗೇಟ್ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಿದರು. ರೈತ ಗೀತೆಗಳನ್ನು ಹಾಡಿದರು. ಇದು ಸುಮಾರು ಒಂದು ಗಂಟೆ ಕಾಲ ನಡೆಯಿತು. ವೇಳೆಗೆ, ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಬರುತ್ತಿದ್ದ ಮುಸ್ಲಿಂ ಸಂಘಟನೆಯ ೪೦ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ರಸ್ತೆ ಸಂಚಾರಕ್ಕೆ ಅಡಚಣೆಯಾಗಿರೋದ್ರಿಂದ ಬೇಗ ಟ್ರಾಕ್ಟರ್ ಗಳನ್ನ ತೆಗೆಯಿರಿ ಎಂದು ರೈತರಿಗೆ ಡಿವೈಎಸ್ಪಿ ಬಸವರಾಜು ಸೂಚನೆ ನೀಡಿದರು. ಇದು ರೈತರಿಗೂ ಮನವರಿಕೆಯಾಯಿತು. ಒಳಗೆ ಅಡುಗೆಯಾಗಿದೆ ಊಟ ಮಾಡಿಕೊಂಡು ಟ್ರಾಕ್ಟರ್ ಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಡಿವೈಎಸ್ಪಿ ಹಾಗೂ ಇನ್ನಿತರ ಪೊಲೀಸರಿಗೆ ಹೇಳಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದೊಳಕ್ಕೆ ಊಟಕ್ಕೆ ಹೋದರು.
ಅಷ್ಟರಲ್ಲಿ ರಭಸವಾಗಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಡಿ. ಪವಾರ್, ತಮ್ಮ ಕೈ ಕೆಳಗಿನ ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು. ಟ್ರಾಕ್ಟರ್ ಗಳನ್ನು ತೆರವುಗೊಳಿಸಿ ಎಂದು ಆದೇಶಿಸಿದರು. ಡಿವೈಎಸ್ಪಿ ಬಸವರಾಜು, ಎಸ್ಪಿ ಬಳಿಗೆ ಬಂದು, ಇನ್ನು ೧೦ ನಿಮಿಷ ಊಟ ಮಾಡಿಕೊಂಡು ರೈತರು ಹೋಗಿಬಿಡ್ತಾರೆ. ಟ್ರಾಕ್ಟರ್ ಗಳನ್ನು ಅವರೇ ತೆಗೆಯುತ್ತೇವೆ ಎಂದು ತಿಳಿಸಿದ್ದಾರೆ ಎಂದರು. ಇದಾವುದನ್ನೂ ಲೆಕ್ಕಿಸದ ಎಸ್ಪಿ, ತಮ್ಮ ಸಿಬ್ಬಂದಿಗಳನ್ನ ಟ್ರಾಕ್ಟರ್ ಗಳಲ್ಲಿ ಕೂರಿಸಿ, ದಬ್ಬಿಸಿ ಟ್ರಾಕ್ಟರ್ ಎತ್ತಿಸಲು ಆರಂಭಿಸಿದರು. ಇನ್ ಸ್ಪೆಕ್ಟರ್ಗಳು ಟ್ರಾಕ್ಟರ್ ಚಾಲಕರಾದರು. ಪಿ.ಸಿ.ಗಳು ದೂಡಿದರು. ಊಟ ಮಾಡುತ್ತಾ ಕುಳಿತಿದ್ದ ರೈತರಿಗೆ ಇದ್ಯಾವುದೂ ಗೊತ್ತಿಲ್ಲ. ಆಗ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನೂರು ಪ್ರಕಾಶ್ ಹಾಗೂ ಆಲೂರು ಚೆನ್ನಬಸಪ್ಪ ಅಲ್ಲಿಗೆ ಬಂದರು. ಪ್ರಕಾಶ್ ಅವರು ಎಸ್ಪಿಯವರ ಬಳಿ ಹೋಗಿ, ಟ್ರಾಕ್ಟರ್ ಗಳನ್ನ ಇನ್ನು ೧೦ ನಿಮಿಷ ನಾವೇ ತೆಗೆದುಕೊಂಡು ಹೋಗ್ತೇವೆ ಎತ್ತಿಸಬೇಡಿ ಎಂದು ಕೋರಿದರು. ಕೋರಿಕೆಯನ್ನು ಕೇಳಿಸಿಕೊಳ್ಳುವ ಗೊಡವೆಗೇ ಹೋಗದ ಎಸ್ಪಿ ಪವಾರ್ ತಮ್ಮಷ್ಟಕ್ಕೆ ತಾವು ತಮ್ಮ ಸಿಬ್ಬಂದಿಗೆ ಆದೇಶ ನೀಡುತ್ತಲೇ ಇದ್ದರು.
ಸಂದರ್ಭದಲ್ಲಿ ಓರ್ವ ರೈತ ಬಂದು ಟ್ರಾಕ್ಟರ್ ಗೇರಲ್ಲಿ ಇದೆ. ಹೀಗೆ ಆಫ್ ಇರುವ ಗಾಡಿಯನ್ನ ತಳ್ಳಿದರೆ ಹಾಳಾಗುತ್ತದೆ. ನಮ್ಮ ಮಾಲೀಕರು ನನ್ನನ್ನು ಬೈಯುತ್ತಾರೆ. ನಾನೇ ತೆಗೆಯುತ್ತೇನೆ ಎಂದು ಹೇಳಿದ. ಮಾತು ಹೇಳಿದ್ದೇ ತಡ, ಅಲ್ಲಿದ್ದ ಪೊಲೀಸರು ಆತನನ್ನ ದನಕ್ಕೆ ಬಡಿಯುವಂತೆ ಬಡಿದರು. ನಂತರ, ಆತನನ್ನು ದರದರ ಹಿಡಿದುಕೊಂಡು ಹೋಗಿ ಪೊಲೀಸ್ ವ್ಯಾನ್ ನಲ್ಲಿ ಕೂರಿಸಿದರು. ಅವನನ್ನು ಹೊಡೆಯಬೇಡಿ ಎಂದ ಇನ್ನೊಬ್ಬ ರೈತನಿಗೂ ಹೊಡೆತಗಳು ಬಿದ್ದವು. ಸ್ವತಃ ಎಸ್ಪಿಯವರೇ ತಮ್ಮ ಬೆಂಬಲಕ್ಕೆ ನಿಂತಿದ್ದು ಪೊಲೀಸರಲ್ಲಿ ಹೆಚ್ಚಿನ ಶಕ್ತಿಯನ್ನು ತುಂಬಿದಂತಿತ್ತು. ಇದು ಇಷ್ಟಕ್ಕೇ ನಿಲ್ಲುತ್ತಿತ್ತು. ಆದರೆ, ಎಸ್ಪಿಯವರು ಸುಮ್ಮನೆ ಬಿಡಲಿಲ್ಲ. ರಿಸರ್ವ್ ವ್ಯಾನ್ ಗಳನ್ನು ಸಾಲಾಗಿ ನಿಲ್ಲಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಕೂಗಿ ಕೂಗಿ ಹೇಳಿದರು. ರೈತರನ್ನ ಬಂಧಿಸುವಂತೆ ತಮ್ಮ ಸಿಬ್ಬಂದಿಗೆ ಆದೇಶಿಸಿದರು. ಇದಕ್ಕೇ ಕಾದಿದ್ದರೇನೋ ಎಂಬಂತೆ, ಅಲ್ಲಿದ್ದ ಪೊಲೀಸರು, ಮೊದಲು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹೇಶಪ್ರಭು ಅವರನ್ನು ಎತ್ತಿಕೊಂಡರು. ರೈತರು, ನಾವೇ ಅರೆಸ್ಟ್ ಆಗುತ್ತೇವೆ ನಮ್ಮನ್ನು ಎಳೆದೊಯ್ಯಬೇಡಿ ಎಂದು ಕಿರುಚಿಕೊಂಡರೂ ಕೇಳಲಿಲ್ಲ. ಹಿಂಸಾತ್ಮಕವಾಗಿ ಎಳೆದು ತಂದು ವ್ಯಾನಿನಲ್ಲಿ ತುಂಬಿದರು. ಮಹೇಶಪ್ರಭು ಜೊತೆಯಿದ್ದ ಹಸಿರು ಸೇನೆ ಅಧ್ಯಕ್ಷ ಮಹೇಶಕುಮಾರ್ ಅವರ ತಲೆಗೆ ಲಾಠಿಯಿಂದ ಹೊಡೆದರು. ಯಾವಾಗ ಮಹೇಶಪ್ರಭು ಅರೆಸ್ಟ್ ಆದರೋ ಪೊಲೀಸರಿಗೆ ಇನ್ನಿಲ್ಲದ ರಾಕ್ಷಸಾವೇಶ ಹೊಮ್ಮಿತು. ಅಲ್ಲಿ ಸಿಕ್ಕ ಸಿಕ್ಕ ರೈತರನ್ನು ತಮ್ಮ ದೊಣ್ಣೆಗಳಿಂದ ಹೊಡೆಯತೊಡಗಿದರು. ಅಲ್ಲೇ ನಿಂತು ಅದೆಲ್ಲವನ್ನೂ ವೀಕ್ಷಿಸುತ್ತಾ ನಿರ್ದೇಶನ ನೀಡುತ್ತಿದ್ದ ಎಸ್ಪಿ ಟಿ.ಡಿ.ಪವಾರ್, ರೈತರಿಗೆ ಹೊಡೆಯಬೇಡಿ ಎಂದು ಆದೇಶಿಸುವ ಗೋಜಿಗೇ ಹೋಗಲಿಲ್ಲ. ಅದರ ಬದಲು, ತಮ್ಮ ಸಿಬ್ಬಂದಿಗೆ ಉತ್ತೇಜನ ನೀಡತೊಡಗಿದರು. ತಮ್ಮ ಮೇಲಧಿಕಾರಿ ಹೇಳಿದ್ದನ್ನು ಮಾಡಲು ಸದಾ ಉತ್ಸುಕರಾಗಿರುವ ಪೊಲೀಸರು, ಬಡಪಾಯಿ ರೈತರಿಗೆ ಎಕ್ಕಾಮಕ್ಕಾ ಬಾರಿಸತೊಡಗಿದರು. ಅವರ ರೈತ ದ್ವೇಷ ಎಷ್ಟಿತ್ತೆಂದರೆ, ವ್ಯಾನ್ ಹತ್ತಲು ಹೋಗುತ್ತಿದ್ದ ರೈತರ ತಲೆಗೆ, ಬೆನ್ನಿಗೆ, ಕುಂಡೆಗೆ ಹೊಡೆಯತೊಡಗಿದರು. ರೈತರಿಗೆ ಅಡುಗೆ ಮಾಡಿಕೊಡುತ್ತಿದ್ದ ತಂಗವೇಲು ಎಂಬಾತನನ್ನು ಅಟ್ಟಿಸಿಕೊಂಡು ಹೋಗಿ ಹೊಡೆದರು. ಆತ ಟವೆಲ್ ಕೈಗೆತ್ತಿಕೊಳ್ಳಲು ಕೆಳಗೆ ಬಗ್ಗಿದರೆ ಅಲ್ಲಿಯೂ ಹೊಡೆದರು. ಚಳವಳಿಗೆ ಬಂದಿದ್ದ ರೈತ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹೋದರು. ಡಿ.ಸಿ. ಕಚೇರಿ ಕೆಲಸಕ್ಕೆ ಬಂದಿದ್ದ ಇನ್ನೂ ಕೆಲವು ಮಹಿಳೆಯರು ಅಲ್ಲಿದ್ದರು. ಅವರೆಲ್ಲಾ ದೊಡ್ಡ ಚರಂಡಿ ಇಳಿದು ಹತ್ತಿ ಓಡತೊಡಗಿದರು. ಪೊಲೀಸರು ಹೊಡೆ ರಭಸಕ್ಕೆ ಲಾಠಿಯೇ ಮುರಿದು ಹೋಯಿತು. ನಾಲ್ಕೈದು ರೈತರ ಬುರುಡೆಯಿಂದ ರಕ್ತ ಬುಳಬುಳನೆ ಸುರಿಯಿತು. ಲಾಠಿ ಪ್ರಹಾರವೆಂದರೆ ಮಂಡಿಯಿಂದ ಕೆಳಗೆ ಹೊಡಯಬೇಕು. ಅದೆಲ್ಲವನ್ನೂ ಗಾಳಿಗೆ ತೂರಿದ ಪೊಲೀಸರು ತಾವೂ ರೈತರಂತೆಯೇ ಮನುಷ್ಯರು ಎಂಬುದನ್ನೇ ಮರೆತು ರೈತರನ್ನು ದನಗಳಿಗೆ ಹೊಡೆಯುವಂತೆ ಹೊಡೆದರು. ತಮ್ಮ ವ್ಯಾನುಗಳಿಗೆ ತುಂಬಿ ಕರೆದೊಯ್ದರು. ಕೇವಲ ೧೫ ನಿಮಿಷದ ಅವಧಿಯಲ್ಲಿ ಇವೆಲ್ಲ ಮುಗಿದುಹೋದವು. ಡಿ.ಸಿ. ಕಚೇರಿ ಆವರಣ ಯುದ್ಧ ಮುಗಿದ ರಣಾಂಗಣದಂತೆ ಕಾಣಿಸುತ್ತಿತ್ತು. ರೈತರು ಹಸಿರು ಟವೆಲ್ ಗಳು ಅಲ್ಲಿ ಹರಿದು ಬಿದ್ದಿದ್ದವು. ಅವರ ಹಸಿರು ಬಾವುಟಗಳು ಚಳವಳಿಯನ್ನು ಅಣಕಿಸುತ್ತಾ ಶೋಕಿಸುತ್ತಿದ್ದವು. ಇತ್ತ ಇಡೀ ಆವರಣದಲ್ಲಿ ಎಸ್ಪಿ ಟಿ.ಡಿ.ಪವಾರ್ ಯುದ್ದ ಗೆದ್ದ ದಂಡನಾಯಕನಂತೆ ಕೈಯಲ್ಲಿ ವಾಕಿಟಾಕಿ ಹಿಡಿದು ಸಂಭ್ರಮಿಸುತ್ತಿದ್ದರು. ಅಲ್ಲಿ ಅವರನ್ನು ಮಾತನಾಡಿಸುವವರು ಯಾರೂ ಇರಲಿಲ್ಲ. ಹೀಗೇಕೆ ಮಾಡಿದಿರಿ ಎಂದು ಕೇಳಲೂ ಸಹ.....