ಬುಧವಾರ, ಜನವರಿ 6, 2010

ಯಾರು ಬರಬೇಕು?

ನಾವೇಕೆ ನಮ್ಮ ನಾಗರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನಮ್ಮ ಶಕ್ತಿಯನ್ನು ಬಳಸಿಕೊಳ್ಳೋದಿಲ್ಲ? ಎಲ್ಲವನ್ನೂ ಬೇರೆ ಯಾರಾದ್ರೂ ಬಂದು ಪರಿಹರಿಸಬೇಕೆಂದು ಕಾಯುತ್ತೇವೆ ಏಕೆ? ನಮ್ಮ ಮನೆಯ ಮುಂದಿನ ಬೀದಿ ದೀಪ ಕೆಟ್ಟಿದೆ ಎಂದು ಮುನಿಸಿಪಾಲಿಟಿಗೊಂದು ಕರೆ ಮಾಡಬಹುದಲ್ಲವೇ? ನಮ್ಮ ಬಡಾವಣೆಯ ರಸ್ತೆ ನಿರ್ಮಾಣ ನಡೀತಿರುವಾಗ ಕೆಲಸ ಗುಣಮಟ್ಟದಲ್ಲಿದೆಯೆ ಎಂದು ಬಡಾವಣೆಯ ಹತ್ತು ಮಂದಿ ಒಂದರ್ಧ ಗಂಟೆ ವೀಕ್ಷಿಸಬಹುದಲ್ಲವೇ? ಸರಿಯಿಲ್ಲದಿದ್ದರೆ ಪ್ರಶ್ನಿಸಬಹುದಲ್ಲವೇ? ಕೆಲಸ ಮುಗಿದ ಮೇಲೆ ಕಾಮಗಾರಿ ಕಳಪೆ ಎಂದು ದೂರುವುದೇಕೆ? ಮೊದಲೇ ತಪ್ಪು ಕಂಡು ಹಿಡಿದು ಸರಿಯಾಗಿ ಕೆಲಸ ಮಾಡಿಸಬಹುದಲ್ಲವೇ? ಈ ಕೆಲಸವನ್ನು ಬೇರೆಯವರು ಮಾಡಲಿ ಎಂದುಕೊಂಡು ನಾವು ಮಾತ್ರ ಅದೇ ಕಳಪೆ ರಸ್ತೆಯಲ್ಲಿ ಬೈಕು ಓಡಿಸುತ್ತಾ ಬೈದುಕೊಂಡು ಹೋಗುತ್ತೇವಲ್ಲವೇ? ಹೀಗೆ ಪ್ರಶ್ನಿಸುವ, ಇದನ್ನು ಪ್ರತಿಭಟಿಸುವ ಗುತ್ತಿಗೆಯನ್ನು ಕನ್ನಡ ಚಳವಳಿಗಾರರಿಗೆ, ಹೋರಾಟಗಾರರಿಗೆ, ರೈತ ಸಂಘಕ್ಕೆ ಕೊಟ್ಟುಬಿಟ್ಟಿದ್ದೇವಲ್ಲವೇ? ಏನಾದರೂ ಆದ್ರೆ ಈ ಸಂಘಟನೆಗಳು ಪ್ರತಿಭಟಿಸಬೇಕು. ನಾವು ಮಾತ್ರ ಅವರು ಪ್ರತಿಭಟಿಸೋದನ್ನ ದೂರದಲ್ಲಿ ನಿಂತು ನೋಡಬೇಕು. ಅವರನ್ನು ಆಡಿಕೊಳ್ಳಬೇಕು. ನಾವೂ ಮಾಡೋದಿಲ್ಲ, ಮಾಡೋರನ್ನೂ ಬಿಡುವುದಿಲ್ಲ.....
ಇದನ್ನೆಲ್ಲಾ ಮಾಡುವ ಸಾಮರ್ಥ್ಯ ನಮಗಿದ್ದರೂ, ನಮ್ಮ ಕೈ ಅಳತೆಯಲ್ಲೇ ಇವನ್ನೆಲ್ಲಾ ಸರಿಪಡಿಸಿಕೊಳ್ಳಬಹುದಾಗಿದ್ದರೂ, ಒಂದು ಫೋನ್ ಹಾಕಿ ಮೇಲಧಿಕಾರಿಗೆ ವಿಷಯ ತಿಳಿಸಬಹುದಾಗಿದ್ದರೂ, ಒಂದು ಅರ್ಜಿ ಹಿಡಿದು ಮೇಲಧಿಕಾರಿಯನ್ನು ಕಂಡು ಈ ಕೆಲಸ ಮಾಡಿಸಬಹುದಾಗಿದ್ದರೂ, ಹತ್ತು ಜನ ಒಟ್ಟಾಗಿ ನಮ್ಮ ಬೀದಿಗೆ ಡಾಂಬರು ಹಾಕಿಸಿಕೊಳ್ಳುವ ತಾಕತ್ತಿದ್ದರೂ, ಅದನ್ನೆಲ್ಲ ಬಿಟ್ಟು ನಾವೆಲ್ಲ ಮಾಡೋ ಕೆಲಸ, ಪತ್ರಕರ್ತರು ಎದುರಿಗೆ ಸಿಕ್ಕರೆ ನಮ್ಮ ಬಡಾವಣೆಗೆ ರಸ್ತೆಯಿಲ್ಲ, ನಮಗೆ ನೀರು ಬರ್ತಿಲ್ಲ, ರಸ್ತೆ ಕಾಮಗಾರಿ ಕಳಪೆಯಾಗಿದೆ...ಇದನ್ನೆಲ್ಲ ನಿಮ್ಮ ಪತ್ರಿಕೆಯಲ್ಲಿ ಯಾ ಚಾನೆಲ್ಲಿನಲ್ಲಿ ಹಾಕಿ.....
ಹಾಗಾದ್ರೆ ಜನಸಾಮಾನ್ಯರಾದ ನಾವು ಮಾಡೋದಾದ್ರೂ ಏನು? ನಮ್ಮ ಮಗುವನ್ನು ಶಾಲೆಗೆ ಬಿಡೋದು, ಲೈಟ್ ಬಿಲ್ ಕಟ್ಟೋದು, ಅಂಗಡಿಗೆ ಹೋಗಿ ಸಾಮಾನು ತರೋದು, ಸಂಜೆ ಸಿಟಿಗೆ ಹೋಗಿ ಚುರುಮುರಿ ತಿನ್ನೋದು, ರಾತ್ರಿ ಊಟ ಮಾಡುತ್ತಾ ರಾಜಕಾರಣಿಗಳನ್ನ, ಅಧಿಕಾರಿಗಳನ್ನ, ಸರಕಾರವನ್ನ, ಯಡಿಯೂರಪ್ಪನ್ನ ಬೈಯೋದು ಇಷ್ಠೇನಾ????????????

ಕಾಮೆಂಟ್‌ಗಳಿಲ್ಲ: